ಎಳೆಗೂಸು ಮತ್ತು ಮಕ್ಕಳ ಗಾನರೀಯ
ಜನನ ಕಾಲದಲ್ಲಿ ತಾಯಿಯ ಯೋನಿಯಲ್ಲಿ ಸ್ರವಿಸುವ ಕೀವು ಶಿಶುವಿನ ಕಣ್ಣಿಗೆ ತಗುಲಿದರೆ ಕಣ್ಣಿನ ಬಿಳಿಪೊರೆಯ ಉರಿಯೂತ ಉಂಟಾಗುತ್ತದೆ. ಇದರಿಂದ ಕುರುಡು ಸಂಭವಿಸಬಹುದು. ಮಗು ಹುಟ್ಟಿದ 21 ದಿವಸಗಳೊಳಗೆ ಕಣ್ಣಿಗೆ ಉರಿಯೂತವಾದರೆ ಸಾಮಾನ್ಯವಾಗಿ ಅದು ಗಾನರೀಯದಿಂದ ಉಂಟಾದುದು ಎಂದು ತಿಳಿಯಬಹುದು. ಕನ್ಯೆಯರ ಭಗೋಷ್ಠಗಳ ಮೇಲೆ ಇರುವ ಪೊರೆಯನ್ನು ಗಾನರೀಯ ಕ್ರಿಮಿ ಅತಿ ಸುಲಭವಾಗಿ ಆಕ್ರಮಿಸುತ್ತದೆ. ಭಗೋಷ್ಠ ಉರಿಯೂತ ಕನ್ಯೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಲೈಂಗಿಕ ಅಕೃತ್ಯ ಮತ್ತು ಬಲಾತ್ಕಾರ ಸಂಪರ್ಕಗಳಿಂದ ಇದು ಉದ್ಭವಿಸುತ್ತದೆ. ಕೊನೆಯದಾಗಿ ಲೈಂಗಿಕ ವಿಕಾರಗಳಿಂದ ಎಂದರೆ ಗುದಲಿಂಗ ಸಂಪರ್ಕದಿಂದ ಗುದದಲ್ಲಿ ಗಾನರೀಯ ರೋಗ ಬರುತ್ತದೆ. 
ರೋಗವನ್ನು ಗುರುತಿಸುವ ವಿಧಾನ
ಕೀವನ್ನು ಗಾಜಿನ ಸ್ಲೈಡಿನ ಮೇಲೆ ಲೇಪಿಸಿ ಗ್ರಾಮನ ವರ್ಣೀಕರಣ ವಿಧಾನದಿಂದ ಬಣ್ಣಕೊಟ್ಟು ಕ್ರಿಮಿಯನ್ನು ಸೂಕ್ಷ್ಮದರ್ಶಕದಲ್ಲಿ ಗುರುತಿಸಬಹುದು. 1960ರಿಂದೀಚೆಗೆ ಕ್ರಿಮಿಯನ್ನು ಪತ್ತೆಹಚ್ಚಲು ಪ್ರತಿರೋಧಿ ಕಿರಣಸ್ಫುರಣ ಪರೀಕ್ಷೆ ಎಂಬುದನ್ನು ಬಳಸುತ್ತಿದ್ದಾರೆ. 
ಚಿಕಿತ್ಸೆ
ಪುರುಷನಲ್ಲಿ ರೋಗ ತೀವ್ರವಿದ್ದಾಗ ಪಿಎಎಮ್ ಚುಚ್ಚುಮದ್ದನ್ನು ಕೊಟ್ಟರೆ ಗುಣವಾಗುತ್ತದೆ. ದೀರ್ಘಕಾಲದ ರೋಗವಿದ್ದರೆ ದಿವಸವೂ 1 ಸಿಸಿ.ಯಂತೆ ನಾಲ್ಕು ದಿವಸ ಕೊಡಬೇಕು. ಹೆಂಗಸರಲ್ಲಿ ರೋಗವನ್ನು ಗುಣಪಡಿಸುವುದು ಬಹಳ ಕಷ್ಟ. ಪಿಎಎಮ್ಅನ್ನು ಕೊಟ್ಟರೂ ರೋಗ ಗುಣವಾಗುವುದೆಂದು ಹೇಳಲಾಗದು. ಸ್ಟ್ರೆಪ್ಟೊಮೈಸಿನನ್ನು ದಿವಸಕ್ಕೆ 1 ಗ್ರಾಮಿನಂತೆ 5 ದಿವಸ ಚುಚ್ಚುಮದ್ದಾಗಿ ಕೊಡಬೇಕು. ಆದರೆ ಕ್ರಿಮಿ ಸ್ಟ್ರೆಪ್ಟೊಮೈಸಿನಿಗೆ ಪ್ರತಿರೋಧ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಬಹುದಾದ್ದರಿಂದ ಅಕ್ರೊಮೈಸಿನ್ ಮುಂತಾದ ಜೀವಿರೋಧಕ ಮದ್ದುಗಳನ್ನು ದಿನಕ್ಕೆ 2 ಗ್ರಾಮಿನಂತೆ 1 ಇಲ್ಲವೆ 2 ದಿವಸ ಕೊಡಬೇಕು. ಹುಟ್ಟುವ ಎಲ್ಲ ಶಿಶುಗಳ ಕಣ್ಣಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣ ಇಲ್ಲವೆ ಪೆನಿಸಿಲಿನ್ ದ್ರಾವಣವನ್ನು ಹಾಕಬೇಕು. ಕಣ್ಣಿನ ಉರಿಯೂತವಿದ್ದರೆ ಪೆನಿಸಿಲಿನ್ ದ್ರಾವಣವನ್ನು ಕಣ್ಣುಗಳಲ್ಲಿ ಆಗಾಗ್ಗೆ ಹಾಕುತ್ತಿರಬೇಕು. ಮತ್ತು ಕೊನೆಯ ಪಕ್ಷ 2 ಲಕ್ಷ ಯೂನಿಟ್ ಪ್ರೊಕೇನ್ ಪೆನಿಸಿಲಿನ್ ಚುಚ್ಚುಮದ್ದನ್ನು ಪ್ರತಿದಿವಸ ಗುಣವಾಗುವವರೆಗೆ ಕೊಡಬೇಕು, ಭಗೋಷ್ಠ ಉರಿಯೂತವಿದ್ದರೆ ಪೆನಿಸಿಲಿನ್ ದ್ರಾವಣದಿಂದ ದಿವಸವೂ ತೊಳೆದು ಪಿಎಎಮ್ನ್ನು ದಿನಕ್ಕೆ 1 ಸಿಸಿ.ಯಂತೆ ಗುಣವಾಗುವವರೆಗೆ ಕೊಡಬೇಕು. ಗುಣವಾದ ಮೇಲೂ ರೋಗಿಗಳನ್ನು 3 ರಿಂದ 6 ತಿಂಗಳವರೆಗೆ ಕಣ್ಗಾವಲಿನಲ್ಲಿಟ್ಟು ಸಂಪುರ್ಣ ಚಿಕಿತ್ಸೆ ಕೊಡಬೇಕು.
ರೋಗ ನಿರೋಧ: ಸಂಭೋಗವಾದ ಕೂಡಲೆ ಪಿಎಎಮ್ ಚುಚ್ಚುಮದ್ದನ್ನು ತೆಗೆದುಕೊಂಡರೆ ಇಲ್ಲವೆ ಸಂಭೋಗ ಕಾಲದಲ್ಲಿ ಲಿಂಗ ಕವಚ ಧರಿಸಿದ್ದರೆ ರೋಗ ಬರಲಾರದು. ಕನಿಷ್ಠ 2 ಲಕ್ಷ ಯೂನಿಟ್ ಪೆನಿಸಿಲಿನ್ ಉಳ್ಳ ಮಾತ್ರೆಯನ್ನು ಸಂಭೋಗದ ಮುಂಚೆ ಇಲ್ಲವೆ ಸಂಭೋಗದ ಅನಂತರ 15 ಗಂಟೆಯೊಳಗೆ ಸೇವಿಸಿದರೆ ರೋಗ ಬರುವ ಸಂಭವ ಕಡಿಮೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ